ತೆಂಕ ಗ್ರಾ.ಪಂ.: ಆರೋಗ್ಯ ಹಾಗೂ ಕಾನೂನು ಮಾಹಿತಿ ಶಿಬಿರ

ಪಡುಬಿದ್ರಿ: ಎರ್ಮಾಳು ತೆಂಕ ಗ್ರಾ.ಪಂ.ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆಗೆ ಪೂಂದಾಡುವಿನಲ್ಲಿ ಆರೋಗ್ಯ ಹಾಗೂ ಕಾನೂನು ಮಾಹಿತಿ ಶಿಬಿರ ನಡೆಯಿತು.
ನ್ಯಾಯವಾದಿ ಮಂಜುನಾಥ ಉಡುಪಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರ ರಕ್ಷಣೆಗಾಗಿ ಸಂವಿಧಾನ ದತ್ತವಾಗಿರುವ ವಿಧಿಗಳು ಹಾಗೂ ಕಾನೂನುಗಳ ಕುರಿತಾಗಿ ವಿವರಿಸಿದರು. ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಆರೋಗ್ಯದ ರಕ್ಷಣೆಯಲ್ಲಿ ಜನರು ನಿರ್ವಹಿಸಬೇಕಾದ ಪಾತ್ರ,ಸ್ವಚ್ಛತೆ,ಪರಿಸರ ಕಾಳಜಿಯ ಕುರಿತಾಗಿ ಮಾಹಿತಿಗಳನ್ನು ಒದಗಿಸಿದರು.

ಸಮಾರಂಭದ ಸಭ್ಯಾಕ್ಷತೆಯನ್ನು ತೆಂಕ ಗ್ರಾ.ಪಂ.ಅಧ್ಯಕ್ಷೆ ಅರುಣಾ ಕುಮಾರಿ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಶ್ಯಾಮಲಾ ಉಪಸ್ಥಿತರಿದ್ದರು.
ತೋಟಗಾರಿಕಾ ಇಲಾಖಾ ಅಧಿಕಾರಿ ಶ್ವೇತಾ ಅವರು ಇಲಾಖೆಯಿಂದ ಪರಿಶಿಷ್ಟ ಜಾತಿ,ಪಂಗಡದ ಜನರಿಗೆ ಸಿಗುವ ವಿಶೇಷ ಸೌಲಭ್ಯಗಳ ಕುರಿತಾದ ಮಾಹಿತಿಗಳನ್ನಿತ್ತರು.
ಈ ಕುಟುಂಬಗಳಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಿಸಲಾಯಿತು. ಗ್ರಾ.ಪಂ.ಪಿಡಿಒ ಆಶಾಲತಾ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.