Shri Swamiji Devikananda visits Jeevanadhara Ashram in Hejmady

ಇರುವಷ್ಟು ದಿನ ನೆಮ್ಮದಿಯ ಜೀವನ ಸಾಗಿಸಿದರೆ ಸಾಮಾಜಿಕ ನೆಮ್ಮದಿ ಸಾಧ್ಯ-ಶ್ರೀ ಸ್ವಾಮಿ ದೇವಿಕಾನಂದ

ಜಾತಿ ಮತ ಬೇಧ ಬಿಟ್ಟು ಕರ್ತವ್ಯವೇ ದೇವರೆಂದು ನಂಬಿ ಇರುವಷ್ಟು ದಿನ ನೆಮ್ಮದಿಯ ಜೀವನ ಸಾಗಿಸಿದರೆ ಸಾಮಾಜಿಕ ನೆಮ್ಮದಿ ಸಾಧ್ಯವಿದೆ ಎಂದು ಕೊಪ್ಪಳ-ಗಂಗಾವತಿಯ ಶ್ರೀ ದೇವಿಕಾನಂದ ಆಶ್ರಮದ ಶ್ರೀ ಸ್ವಾಮಿ ದೇವಿಕಾನಂದರು ಹೇಳಿದರು.
ಜೀವನಧಾರಾ ಧ್ಯಾನ ಯೋಗ ಕೇಂದ್ರದ ಸ್ಥಾಪಕರಾದ ಸ್ವಾಮಿ ನಿರವ್ ಸಂಕೇತ್‍ರವರ ಆಹ್ವಾನದ ಮೇರೆಗೆ ಶನಿವಾರ ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಳದ ಹಿಂಭಾಗದ ಪದ್ಮಾವತಿ ಭವನದಲ್ಲಿರುವ ಜೀವನಧಾರಾ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭ ದೇವಿಕಾನಂದರು ಆಶೀರ್ವಚಿಸಿದರು.

ಸ್ವಯಂಪ್ರೇರಿತ ಬುದ್ಧಿಯಿಂದ ಜಾತಿ ತಾರತಮ್ಯ ಹೋಗಲಾಡಿಸಲು ಸಾಧ್ಯವಿದೆ ಎಂದ ಅವರು,ಲೋಕ ಕಲ್ಯಾಣಾರ್ಥವೇ ನಮ್ಮ ಉದ್ದೇಶ.ಇದೇ ಉದ್ದೇಶದಿಂದ ಒಂದು ವರ್ಷ ಕಾಲ ಅಖಂಡ ತಪಸ್ಸು ಆಚರಿಸಿದ್ದೆ ಎಂದವರು ಹೇಳಿದರು.
ಈ ಜೀವನದಲ್ಲಿ ಯಾರೂ ಎಲ್ಲವನ್ನು ಗೆಲ್ಲಲು ಸಾಧ್ಯವಿಲ್ಲ.ಅದೇ ರೀತಿ ನಮ್ಮ ಎಲ್ಲಾ ಆಶೆಗಳನ್ನು ಈಡೇರಿಸಲು ಅಸಾಧ್ಯ.ಸಮಾಜ ಸೇವೇಯೆ ಈಶ ಸೇವೆ ಎಂದು ತಿಳಿದು ಕಣ್ಣೀರು ಒರೆಸುವ ಕೆಲಸ ನಮ್ಮಿಂದಾಗಬೇಕು.ಈಗಿನ ಜಂಜಾಟಕ್ಕೆ ಆಶೆಯೇ ಮೂಲ ಕಾರಣ.ಅದನ್ನು ದೂರೀಕರಿಸಲು ಧ್ಯಾನದಿಂದ ಮಾತ್ರ ಸಾಧ್ಯ.ಸಹಜ ಜೀವನದಿಂದಲೇ ಎಲ್ಲವನ್ನೂ ಗೆಲ್ಲಬೇಕು ಎಂದವರು ಅಭಿಪ್ರಾಯಿಸಿದರು.
ಇಂದಿನ ಕಾಲಘಟ್ಟದಲ್ಲಿ ಜನರಿಗೆ ಯಾರ ಮೇಲೂ ನಂಬಿಕೆಯಿಲ್ಲ.ಮುಖ್ಯವಾಗಿ ಸಾಮಾಜಿಕ ಕಳಕಳಿ ಇಲ್ಲ.ಅಧಿಕಾರದ ಲಾಲಸೆ ಅಧಿಕವಾಗಿದೆ.ಧಾರ್ಮಿಕ ಪ್ರಜ್ಞೆ ಬರುತ್ತಿಲ್ಲ.ಅದನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದ ದೇವಿಕಾನಂದರು,ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಗ್ಗೆ ಕಾಳಜಿಯುಳ್ಳವರು.ಅದೇ ರೀತಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪರರ ಬಗ್ಗೆ ಕಾಳಜಿಯುಳ್ಳವರು.ಆದರೆ ಸಮ್ಮಿಶ್ರ ಸರಕಾರದಿಂದ ನಾವಂದುಕೊಂಡಷ್ಟು ಉದ್ಧಾರ ಅಸಾಧ್ಯ ಎಂದವರು ಹೇಳಿದರು.
ಗಂಗಾವತಿಯ ಶ್ರೀ ದೇವಿಕಾನಂದ ಆಶ್ರಮದಲ್ಲಿ ಬಡಜನರಿಗೆ ಸಹಾಯ,ತಿಳುವಳಿಕೆ,ಸಾಮಾಜಿಕ ಬದಲಾವಣೆ,ಅಶಾಂತಿ ದೂರೀಕರಿಸುವುದು ಇತ್ಯಾದಿ ಸಾಮಾಜಿಕ ಕಳಕಳಿಯ ಕಾರ್ಯಗಳು ನಿರಂತರ ನಡೆಯುತ್ತಿದೆ ಎಂದವರು ಹೇಳಿದರು.
ಈ ಸಂದರ್ಭ ಶ್ರೀ ದೇವಿಕಾನಂದರನ್ನು ಆಶ್ರಮದ ವತಿಯಿಂದ ಉದ್ಯಮಿ ರಾಲ್ಫಿ ಡಿಕೋಸ್ಟಾ ಸನ್ಮಾನಿಸಿ ಗೌರವಿಸಿದರು.ಸ್ವಾಮಿ ನಿರವ್ ಸಂಕೇತ್ ಸ್ವಾಗತಿಸಿದರು.ರವಿ ಹೆಜಮಾಡಿ,ಸುಭಾಸ್ ಜಿ.ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ನಿರಂತರ ಎರಡು ದಿನಗಳ ಕಾಲ ಶ್ರೀ ದೇವಿಕಾನಂದರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.ಇದೇ ವೇಳೆ ವಿವಿಧ ಭಜನಾ ಮಂಡಳಿಯವರಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.

 

News and picture by:

HK Hejmady