ಮೆಚ್ಚುಗೆಗೆ ಪಾತ್ರವಾದ ಬೆಳಪು ಗ್ರಾಪಂ ಅಧ್ಯಕ್ಷರ ಶೈಕ್ಷಣಿಕ ಯೋಜನೆ

ಮೆಚ್ಚುಗೆಗೆ ಪಾತ್ರವಾದ ಬೆಳಪು ಗ್ರಾಪಂ ಅಧ್ಯಕ್ಷರ ಶೈಕ್ಷಣಿಕ ಯೋಜನೆ
ಮುಂಜಾನೆ 5 ಗಂಟೆಗೆ ಪ್ರತಿ ವಿದ್ಯಾರ್ಥಿಗಳ ಮನೆಗೆ ಅಧ್ಯಕ್ಷ ಭೇಟಿ
ಪಡುಬಿದ್ರಿ: ಕಾಪು ತಾಲೂಕಿನ ಬೆಳಪು ಗ್ರಾಪಂ ಅಭಿವೃದ್ಧಿಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದೆ. ಇದೀಗ ಗ್ರಾಮದ ಸಂಯುಕ್ತ ಪ್ರೌಢಶಾಲೆಯ 10ನೇ ತರಗತಿಯ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ, ಪ್ರೌಢಶಿಕ್ಷಣ ವಿದ್ಯಾರ್ಥಿಗಳ ಜೀವನದ ಬುನಾದಿ ಇದನ್ನು ಸರಿಯಾಗಿ ಸದುಪಯೋಗಿಸಿಕೊಳ್ಳಿ ಎಂದು ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೋಧಿಸಿದರು.

ಅವರು 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಅಧ್ಯಾಪಕರುಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ನಡೆಸಿ ಮಾತನಾಡುತ್ತಾ ನಮ್ಮ ಸರಕಾರಿ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ನಿಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆಗಳಿದ್ದರೆ ಮುಕ್ತವಾಗಿ ತಿಳಿಸಿ ನಾನು ಸಹಕರಿಸುತ್ತೇನೆ. ನೀವು ನಮ್ಮ ಮಕ್ಕಳಿದ್ದಂತೆ ನಿಮ್ಮ ಭವಿಷ್ಯ ರೂಪಿಸುವುದು ನಮ್ಮ ಜವಾಬ್ದಾರಿ. ಹೆತ್ತವರು ಮಕ್ಕಳನ್ನು ಪ್ರೀತಿಸಿದಷ್ಟು ವಿದ್ಯಾ ಕಲಿಕೆಯಲ್ಲೂ ಅಷ್ಟೇ ಕಠಿಣ ನಿರ್ಧಾರ ಕೈಗೊಳ್ಳಬೇಕು. ಒಂದು ಸಾಮಾನ್ಯ ಉದ್ಯೋಗ ಅಥವಾ ರಿಕ್ಷಾ ಡ್ರೈವರ್ ಆಗಬೇಕಿದ್ದರೂ 10ನೇ ತರಗತಿ ವಿದ್ಯಾಭ್ಯಾಸ ಕಡ್ಡಾಯವಾಗಿರುತ್ತದೆ. ನೀವು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೂ ಪ್ರೌಢಶಿಕ್ಷಣ ಕಲಿಕೆ ಕಡ್ಡಾಯವಿದೆ. ಕಠಿಣ ಪರಿಶ್ರಮದಿಂದ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ಶ್ರದ್ಧೆಯಿಂದ ಏಕಾಗ್ರತೆಯಿಂದ ವಿದ್ಯೆಯನ್ನು ಕಲಿಯಿರಿ. ಶಿಕ್ಷಕರನ್ನು ಗೌರವಿಸಿ ಎಂದು ಮಕ್ಕಳಿಗೆ ಬುದ್ಧಿಮಾತು ಹೇಳಿದರು.

ನೀವು ನಮ್ಮವರು, ನನ್ನ ಗ್ರಾಮದ ಕುಟುಂಬದ ಸದಸ್ಯರು, ಸರಕಾರಿ ಶಾಲೆಯಲ್ಲಿ ಓದುತ್ತೇವೆಂಬ ಕೀಳರಿಮೆ ಬೇಡ, ಅಂಬೇಡ್ಕರ್, ಗಾಂಧೀಜಿ, ಅಬ್ದುಲ್ ಕಲಾಂರವರು ಸರಕಾರಿ ಶಾಲೆಯಲ್ಲಿ ಓದಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನು 3 ತಿಂಗಳು ನಿಮ್ಮ ಕಲಿಕೆಯ ಜವಾಬ್ದಾರಿ ನಾವೇ ವಹಿಸಿಕೊಳ್ಳುತ್ತೇವೆ, ಹೆತ್ತವರು ಸಹಕರಿಸಿ ಎಂದರು.

ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ವಿಶೇಷ ಕ್ಲಾಸ್ ತೆಗೆದುಕೊಳ್ಳುತ್ತೇವೆ. ಸಾಯಂಕಾಲ 4 ರಿಂದ 7 ಗಂಟೆಯವರೆಗೆ ಓದಿಸುತ್ತೇವೆ. ಇದಕ್ಕೆ ಅಧ್ಯಾಪಕರುಗಳು ಸಂಪೂರ್ಣ ಸಹಕರಿಸುವ ಭರವಸೆ ನೀಡಿದ್ದಾರೆ. ಪ್ರತಿ 3 ವಿದ್ಯಾರ್ಥಿಗಳಿಗೆ ಒಂದು ಅಧ್ಯಾಪಕರನ್ನು ನೇಮಿಸಿ ಅವರು ತರಬೇತಿ ನೀಡುತ್ತಾರೆ. ಬೆಳಿಗ್ಗೆ 5 ಗಂಟೆಗೆ ವಿದ್ಯಾರ್ಥಿಗಳು ಎದ್ದು ಓದಬೇಕು. ಪ್ರತಿಯೊಂದು ವಿದ್ಯಾರ್ಥಿಗಳ ಮನೆಗೆ ಬೆಳಿಗ್ಗೆ 5 ಗಂಟೆಗೆ ನಾನೇ ಭೇಟಿ ನೀಡುತ್ತೇನೆ. ನಿಮ್ಮೊಂದಿಗೆ ನಾನಿರುತ್ತೇನೆಂಬ ಭರವಸೆ ನೀಡಿರುತ್ತಾರೆ. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರ ಬಡ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ವಿನೂತನ ಪ್ರಯೋಗಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.