ಪಡುಬಿದ್ರಿ,ಹೆಜಮಾಡಿ ತಲಾ ಒಂದು ಪಾಸಿಟಿವ್

ಹೆಜಮಾಡಿಯ 10ನೇ ತರಗತಿ ವಿದ್ಯಾರ್ಥಿನಿಗೆ ಪಾಸಿಟಿವ್-ಪರೀಕ್ಷಾ ಕೇಂದ್ರ ಸ್ಯಾನಿಟೈಸೇಶನ್
ಪಡುಬಿದ್ರಿ: ನಾಲ್ಕು ದಿನದ ಹಿಂದೆ ಪಡುಬಿದ್ರಿಯ ಬೇಂಗ್ರೆ ಬಳಿ ಪಾಸಿಟಿವ್ ಬಂದ ಗರ್ಭಿಣಿ ಮಹಿಳೆಯ ಪತಿ 37 ವಷದ ವ್ಯಕ್ತಿಗೆ ಭಾನುವಾರ ಸೋಂಕು ತಗಲಿರುವುದು ದೃಢಪಟ್ಟಿದೆ. ಅವರಿಬ್ಬರೂ ಮಹಾರಾಷ್ಟ್ರದಿಂದ ಆಗಮಿಸಿ ಹೋಮ್ ಕ್ವಾರಂಟೈನ್‍ನಲ್ಲಿದ್ದರು.

ವಿದ್ಯಾರ್ಥಿನಿಗೆ ಸೋಂಕು ದೃಢ: ಹೆಜಮಾಡಿ ಕೋಡಿಯ 11 ಮಂದಿ ಸೋಂಕಿತರ ಪೈಕಿ ಮೊದಲ ವ್ಯಕ್ತಿಯ ಸಂಪರ್ಕದಿಂದಿದ್ದ ಹೆಜಮಾಡಿ ಎನ್‍ಎಸ್ ರಸ್ತೆಯ ವ್ಯಕ್ತಿ ಸ್ವಯಂಪ್ರೇರಣೆಯಿಂದ ಪರೀಕ್ಷೆಗೊಳಪಟ್ಟ ಸಂದರ್ಭ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಎದುರಿಸುತ್ತಿದ್ದ ಅವರ 16 ವರ್ಷದ ಮಗಳ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಭಾನುವಾರ ಸೋಂಕು ತಗಲಿರುವುದು ದೃಢಪಟ್ಟಿದೆ. ಇದೇ ಸಂದರ್ಭ ಮನೆಯಲ್ಲಿದ್ದ ಇನ್ನಿಬ್ಬರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.

ಇಬ್ಬರನ್ನೂ ಕಾರ್ಕಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಜಮಾಡಿ ಕೋಡಿಯ ಪ್ರಥಮ ಸೋಂಕಿತ 54 ವರ್ಷದ ವ್ಯಕ್ತಿ ಮಣಿಪಾಲ ಆಸ್ಪತೆಗೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಿದೆ.

ಪರೀಕ್ಷಾ ಕೇಂದ್ರ ಸ್ಯಾನಿಟೈಸೇಶನ್: 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರ ಹೆಜಮಾಡಿ ಪರೀಕ್ಷಾ ಕೇಂದ್ರದಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸೇಶನ್ ಮಾಡಲಾಯಿತು.
ವಿದ್ಯಾರ್ಥಿನಿ ಜೂನ್ 25 ಮತ್ತು 27ರಂದು ಎರಡು ಪರೀಕ್ಷೆ ಬರೆದಿದ್ದಳು. ಆಕೆಯಿದ್ದ ತರಗತಿ ಕೋಣೆಯನ್ನು ಸ್ಯಾನಿಟೈಸೇಶನ್ ಮಾಡಿ ಮುಚ್ಚಲಾಗಿದೆ. ಮುಂದಿನ ಪರೀಕ್ಷೆಗಳು ಸುರಕ್ಷಿತ ಅಂತರದೊಂದಿಗೆ ಬೇರೆ ತರಗತಿ ಕೋಣೆಯಲ್ಲಿ ನಡೆಯಲಿದೆ.

ಕೇಂದ್ರದಲ್ಲಿ 183 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಸೋಂಕಿತ ವಿದ್ಯಾರ್ಥಿನಿಗೆ ಮುಂದೆ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ತಿಳಿಸಿದ್ದಾರೆ.
ಸ್ಯಾನಿಟೈಸೇಶನ್, ಸಾಮಾಜಿಕ ಅಂತರದೊಂದಿಗೆ ಸೋಂಕಿತ ವಿದ್ಯಾರ್ಥಿನಿಯೊಂದಿಗೆ ಪರೀಕ್ಷಾ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿಗಳ ಅರೋಗ್ಯ ತಪಾಸಣೆ ಬಗ್ಗೆ ತೀರ್ಮಾನಿಸಿಲ್ಲ. ಕೇಂದ್ರದ ಹೊರಗಡೆ ಆಕೆಯೊಂದಿಗೆ ವಿದ್ಯಾರ್ಥಿಗಳು ತೆರಳಿರುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಆಕೆಯೊಂದಿಗೆ ತೆರಳಿದ್ದರೆ ಅವರ ಆರೋಗ್ಯ ತಪಾಸಣೆ ಬಗ್ಗೆಯೂ ಇಲಾಖಾ ಗಮನಕ್ಕೆ ತರವುದಾಗಿ ಮಂಜುಳಾ ತಿಳಿಸಿದ್ದಾರೆ.

ಸಮುದಾಯಕ್ಕೆ ಹರಡುವ ಭೀತಿ: ಹೆಜಮಾಡಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಸಮುದಾಯಕ್ಕೆ ಹರಡುವ ಬಗ್ಗೆ ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ. ಪ್ರಯಾಣದ ವಿವರ ಮುಚ್ಚಿಟ್ಟ ನಡ್ಸಾಲಿನ ಇಬ್ಬರು ಸಹೋದರರು ಮತ್ತು ಹೆಜಮಾಡಿ ಕೋಡಿಯ ವ್ಯಕ್ತಿಯ ಸಂಪರ್ಕದಿಂದ ಈಗಾಗಲೇ 16 ಮಂದಿಗೆ ಸೋಂಕು ತಗುಲಿದೆ. ಇದೇ ವೇಳೆ ಹೆಜಮಾಡಿ ಕೋಡಿಯ ವ್ಯಕ್ತಿಯ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹೆಜಮಾಡಿ ಕೋಡಿಯ 50 ವರ್ಷದ ಮಹಿಳೆಗೆ ಭಾನುವಾರ ಜ್ವರ ಕಾಣಿಸಿಕೊಂಡಿದ್ದ ಆಕೆಯನ್ನು ಮತ್ತು ಆಕೆಯ ಮಗನನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಗನಿಗೆ ಜ್ವರದ ಲಕ್ಷಣ ಇಲ್ಲದ ಕಾರಣ ಮನೆಗೆ ಕಳುಹಿಸಿ ಕ್ವಾರಂಟೈನ್‍ಗೊಳಪಡಿಸಲಾಗಿದೆ. ಈತನ್ಮಧ್ಯೆ ಹೆಜಮಾಡಿ ಕೋಡಿಯ ಪ್ರಥಮ ಸೋಂಕಿತನ ಸಂಪರ್ಕದಲ್ಲಿದ್ದ ಇಬ್ಬರು ಸ್ವಯಂಪ್ರೇರಣೆಯಿಂದ ಪರೀಕ್ಷೆ ನಡೆಸಿದ್ದು, ಇನ್ನಷ್ಟೇ ವರದಿ ಬರಬೇಕಿದೆ. ಇದೀಗ ಗ್ರಾಮದಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗಿದೆ.