ಮೂಲ್ಕಿ ಹೋಬಳಿಯಲ್ಲಿ ಮೂರು ಮಂದಿಗೆ ಸೊಂಕು ದೃಢ

ಮೂಲ್ಕಿ: ಮೂಲ್ಕಿ ಹೋಬಳಿಯಲ್ಲಿ ಮಹಿಳೆ ಮತ್ತು ಇಬ್ಬರು ಪುರುಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಕಾರ್ನಾಡು ಜಂಕ್ಷನ್ ಬಳಿಯ 81ರ ಹರೆಯದ ಮಹಿಳೆಗೆ 3 ದಿನದ ಹಿಂದೆ ಜ್ವರ ಬಂದ ಕಾರಣ ಮಂಗಳೂರು ಖಾಸಗಿ ಆಸ್ಪತೆಗೆ ದಾಖಲಿಸಿದ್ದು ಗಂಟಲು ದ್ರವ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಸದ್ಯ ಅವರು ಆರೋಗ್ಯದಿಂದಿದ್ದಾರೆ. ಅವರಿಗೆ ಮೂಲ್ಕಿ ಬಸ್ ನಿಲ್ದಾಣ ಸಮೀಪ ಅಂಗಡಿಯಿದೆ. ಅವರಿರುವ ವಸತಿ ಸಂಕೀರ್ಣವನ್ನು ಬಫರ್ ಝೋನ್ ಆಗಿ ಗುರುತಿಸಿ ಸೀಲ್‍ಡೌನ್ ಮಾಡಲಾಗಿದೆ.

ಮೂಲತಃ ಚಿತ್ರಾಪು ನಿವಾಸಿ ಮೂಲ್ಕಿ ಬಪ್ಪನಾಡು ದೇವಳ ಸಮೀಪದ ವಸತಿ ಸಂಕೀರ್ಣದ ನಿವಾಸಿಯಾಗಿದ್ದ 43ರ ಹರೆಯದ ವ್ಯಕ್ತಿಗೂ 3 ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಅವರು ಸ್ವಯಂಪ್ರೇರಣೆಯಿಂದ ಗಂಟಲು ಸ್ರಾವ ಪರೀಕ್ಷೆಗೊಳಪಟ್ಟಿದ್ದು, ಮಂಗಳವಾರ ವರದಿ ಬಂದಾಗ ಪಾಸಿಟಿವ್ ಬಂದಿದೆ. ಅವರೂ ಅರೋಗ್ಯದಿಂದಿದ್ದು, ಅವರನ್ನು ದೇರಳಕಟ್ಟೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅವರ ಮನೆಯನ್ನು ಸೀಲ್‍ಡೌನ್ ಮಾಡಿ ಮನೆ ಮಂದಿಯನ್ನು ಕ್ವಾರಂಟೈನ್‍ಗೊಳಪಡಿಸಲಾಗಿದೆ.

ಮೆನ್ನಬೆಟ್ಟು ಬಳಿ 61ರ ಹರೆಯದ ವ್ಯಕ್ತಿಗೂ ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿರುವ ವಸತಿ ಸಂಕೀರ್ಣ ಸ್ಯಾನಿಟೈಸ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ.