ಬೆಳಪು ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ-ಪ್ರೀತಿ ಗೆಹ್ಲೋಟ್

ಪಡುಬಿದ್ರಿ: ಬೆಳಪು ಗ್ರಾ.ಪಂ.ಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಘಟಕದ ಯೋಜನಾ ಪ್ರದೇಶವನ್ನು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‍ರವರು ಪರಿಶೀಲಿಸಿದರು.

ಪ್ಲಾಸ್ಟಿಕ್, ಘನ ಮತ್ತು ದ್ರವ ತ್ಯಾಜ್ಯವನ್ನು ಬೇರ್ಪಡಿಸುವ ವಿಧಾನ, ಕೋಳಿ ತ್ಯಾಜ್ಯಕ್ಕಾಗಿ ಪ್ರತ್ಯೇಕ ಘಟಕ ಮಾಡಿರುವುದನ್ನು ಗಮನಿಸಿ ಬೆಳಪುವಿನಲ್ಲಿ ರಾಜ್ಯಕ್ಕೆ ಮಾದರಿಯಾದ ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಪ್ರೀತಿ ಗೆಹ್ಲೋಟ್‍ರವರು ತಿಳಿಸಿದರು.

ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಮಾದರಿ ಯೋಜನೆಗಳನ್ನು ಅನುಷ್ಟಾನ ಮಾಡಿರುವ ಬಗ್ಗೆ ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿಯವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮಾಹಿತಿ ನೀಡಿ ಕೈಗಾರಿಕಾ ಪಾರ್ಕ್, ಅತ್ಯಾಧುನಿಕ ಸಂಶೋಧನಾ ಕೇಂದ್ರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಪ್ರವಾಸೋದ್ಯಮಕ್ಕಾಗಿ ಕೆರೆ ಅಭಿವೃದ್ಧಿಗೊಳಿಸಿ ಬೋಟಿಂಗ್ ವ್ಯವಸ್ಥೆ, ಮೀನು ಸಾಕಾಣಿಕೆ ಯೋಜನೆ, 1 ಲಕ್ಷ ಸಸಿ ನೆಟ್ಟು ಹಸಿರು ವನ ನಿರ್ಮಾಣ, ಸುಮಾರು ವಸತಿ ರಹಿತರಿಗೆ ನಿವೇಶನ ಸಹಿತ ವಸತಿ ಬಡಾವಣೆ ನಿರ್ಮಾಣ, ಮಾದರಿಯಾದ ಹಿಂದೂ ರುದ್ರಭೂಮಿ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.

ಬೆಳಪು ಗ್ರಾಮದ ಮುಂದಿನ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಾಧುನಿಕವಾದ ಯೋಜನೆಯ ಮೂಲಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಈಗಾಗಲೇ 3 ಎಕ್ರೆ ಜಾಗವನ್ನು ಮೀಸಲಿಡಲಾಗಿದೆ. ಕಸದಿಂದ ರಸ ಹಾಗೂ ರಾಸಾಯನಿಕ ಸಾವಯವ ಗೊಬ್ಬರ ಮಾಡುವ ಘಟಕವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆಯನ್ನು ರೂಪಿಸಬೇಕೆಂಬುದು ನಮ್ಮ ಆಶಯ. ಸುತ್ತ ಮುತ್ತಲಿನ ಗ್ರಾಮದ ತ್ಯಾಜ್ಯ ವಿಲೇವಾರಿಗೂ ಸೂಕ್ತವಾಗಿ ಸಹಕಾರ ನೀಡಿದರೆ ಅವಕಾಶ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಬೆಳಪು ಗ್ರಾ.ಪಂ. ಕೈಗೊಂಡ ಅಭಿವೃದ್ಧಿ ಯೋಜನೆಗಳು ಆರ್ಥಿಕ ಸಂಪನ್ಮೂಲ ಅಭಿವೃದ್ಧಿಗೆ ಪಂಚಾಯಿತಿ ರೂಪಿಸಿದ ಯೋಜನೆ, ಸಮಗ್ರವಾದ ಕ್ರೀಡಾಂಗಣ ನಿರ್ಮಾಣ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಬಗ್ಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿ ಮತ್ತು ರಾಜ್ಯಕ್ಕೆ ಮಾದರಿಯಾದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿಶೇಷವಾಗಿ ಒತ್ತು ನೀಡುವುದೆಂದು ತಿಳಿಸಿದರು.

ಈ ಸಂದರ್ಭ ಜಿ. ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ಪಿ.ಡಿ.ಒ ಹೆಚ್. ಆರ್. ರಮೇಶ್, ಕಾರ್ಯದರ್ಶಿ ಸುಮಿತ್ರಾ ಆಚಾರ್ಯ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.