ಪಲಿಮಾರು: ಲಿಲ್ಲಿ ರಾಮದಾಸ ಪ್ರಭು ಟ್ರಸ್ಟ್ ವತಿಯಂದ ವಿದ್ಯಾರ್ಥಿ ವೇತನ ವಿತರಣೆ

ಪಡುಬಿದ್ರಿ: ಪಲಿಮಾರಿನ ಲಿಲ್ಲಿ ರಾಮದಾಸ ಪ್ರಭು ಶೈಕ್ಷಣಿಕ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ 21ನೇ ವರ್ಷದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ನಡೆಯಿತು.
ಸುಮಾರು 428 ವಿದ್ಯಾರ್ಥಿಗಳಿಗೆ 9.5 ಲಕ್ಷರೂ. ಗಳ ವಿದ್ಯಾರ್ಥಿ ವೇತನವನ್ನು ಏಳನೇ ತರಗತಿ, ಎಸೆಸೆಲ್ಸಿ, ಪಿಯುಸಿ, ಪದವಿ, ಎಂಜೀನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಹಂಚಲಾಯಿತು. ಹಲವರಿಗೆ ವೈದ್ಯಕೀಯ ನೆರವನ್ನೂ ವಿತರಿಸಲಾಯಿತು.

ಉಡುಪಿ ಎಂಜಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಜಿ. ವಿಜಯ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಟ್ರಸ್ಟ್‍ನ ಅಧ್ಯಕ್ಷ ರಾಮದಾಸ್ ಪ್ರಭು ಪಲಿಮಾರು ಹಾಗೂ ಲಿಲ್ಲಿ ರಾಮದಾಸ ಪ್ರಭು ದಂಪತಿ ಉಪಸ್ಥಿತರಿದ್ದರು.

ಪ್ರಧಾನ ಭಾಷಣ ಮಾಡಿದ ನಿವೃತ್ತ ಪ್ರಾಧ್ಯಾಪಕರೂ, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಮೇಜರ್ ರಾಧಾಕೃಷ್ಣ ಮಾತನಾಡಿ, ಪ್ರತಿಯೊಬ್ಬನೂ ತನ್ನ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕಾಗಿ ಮೀಸಲಿಡಬೇಕು. ಮೌಲ್ಯವನ್ನು ಕಲಿಸಿಕೊಡದ ಶಿಕ್ಷಣ ಮತ್ತು ನೈತಿಕತೆ ಇಲ್ಲದ ಬದುಕು ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ 21 ವರ್ಷಗಳ ಹಿಂದೆ ಈ ಟ್ರಸ್ಟ್ ಸ್ಥಾಪನೆ ಮಾಡಿ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿರುವ ಹಿರಿಯರಾದ ರಾಮದಾಸ ಪ್ರಭು ದಂಪತಿ ಪ್ರಾತಃ ಸ್ಮರಣೀಯರು ಎಂದು ಅಭಿನಂದಿಸಿದರು.

ವಿದ್ಯಾ ಸಂಸ್ಥೆಗಳಿಗೆ ಕೊಡುಗೆ: ಇದೇ ಸಂದರ್ಭದಲ್ಲಿ ಪಲಿಮಾರಿನ ಸರಕಾರಿ ಪಿಯು ಕಾಲೇಜಿನ ಬಿಸಿಯೂಟ ಯೋಜನೆಗೆ 1 ಲಕ್ಷರೂ. ಗಳ ಚೆಕ್ಕನ್ನು ಮತ್ತು ತೆಕ್ಕಟ್ಟೆಯ ಸೇವಾಸಂಗಮ ವಿದ್ಯಾಸಂಸ್ಥೆಯ ಅಭಿವೃದ್ದಿ ನಿದಿಗೆ 50000ರೂ. ಗಳ ಚೆಕ್ಕನ್ನು ರಾಮದಾಸ ಪ್ರಭು ಹಸ್ತಾಂತರಿಸಿದರು.

ಸನ್ಮಾನ: ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ಮಾಡಿದ ಡಾ. ಸೌದಾಮಿನಿ ಭಟ್, ರ್ಯಾಕ್ ವಿಜೇತೆ ವೃಂದಾ ಕೊನ್ನಾರ್, ಎಸೆಸೆಲ್ಸಿಯಲ್ಲಿ ರಾಜ್ಯ ಮಟ್ಟಕ್ಕೆ ದ್ವಿತೀಯ ರ್ಯಾಂಕ್ ಗಳಿಸಿದ ಮನ್ವಿತ್ ಎಂ. ಪ್ರಭು ಅವರನ್ನು ಸಮ್ಮಾನಿಸಲಾಯಿತು.

ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಮಂಜುನಾಥ ಕೋಟ್ಯಾನ್, ಪಲಿಮಾರು ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯೆ ಗ್ರೆಟ್ಟಾ ಮೊರಾಸ್, ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಸಂಸ್ಥೆಯ ಸ್ಥಾಪಕ ಡಾ. ಶ್ರ್ರೀನಿವಾಸ ಪಡಿಯಾರ್, ಟ್ರಸ್ಟಿಗಳಾದ ರಮೇಶ ನಾಯಕ್, ಪಾಂಡುರಂಗ ಪ್ರಭು ಮುಖ್ಯ ಅತಿಥಿಗಳಾಗಿದ್ದರು.

ಲಂಡನ್‍ನ ಖ್ಯಾತ ಶಿಶು ತಜ್ಞ ಡಾ. ಉಮೇಶ್ ಪ್ರಭು ಶುಭಾಶಂಸನೆಗೈದರು. ಟ್ರಸ್ಟಿ ಗಾಯತ್ರಿ ಪ್ರಭು ಸ್ವಾಗತಿಸಿದರು. ಶಿಕ್ಷಕ , ಜೆಸಿಐ ರಾಷ್ಟ್ರೀಯ ತರಬೇತುದಾರ, ರಾಜೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ಪ್ರಭು ವಂದಿಸಿದರು.

ಫೋಟೋ: ಕ್ಯಾ: ಪಲಿಮಾರಿನ ಸರಕಾರಿ ಪಿಯು ಕಾಲೇಜಿನ ಬಿಸಿಯೂಟ ಯೋಜನೆಗೆ 1 ಲಕ್ಷರೂ. ಗಳ ಚೆಕ್ಕನ್ನು ವಿತರಿಸಲಾಯಿತು.