ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಘಟನೆ ಉದ್ಘಾಟನೆ

ಯುವ ಸಂಘಟನೆಗಳೇ ದೇಶದ ಬಹುದೊಡ್ಡ ಆಸ್ತಿ-ಗುರ್ಮೆ ಸುರೇಶ್ ಶೆಟ್ಟಿ

ಪಡುಬಿದ್ರಿ: ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ಭಾರತ ದೇಶಕ್ಕೆ ಯುವ ಸಂಘಟನೆಗಳೇ ಬಹು ದೊಡ್ಡ ಆಸ್ತಿಯಾಗಿದೆ. ಗ್ರಾಮೀಣ ಯುವ ಸಂಘಟನೆಗಳು ಯುವ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಪಡುಬಿದ್ರಿ ಬೀಚ್‍ನಲ್ಲಿ ಭಾನುವಾರ ರಾತ್ರಿ ನಡೆದ ಪಡುಬಿದ್ರಿ ಕರಾವಳಿ ಯುವ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಯುವ ಸಂಘಟನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಲ್ಪೆ ಉದ್ಯಮಿ ಸಾಧು ಸಾಲ್ಯಾನ್, ಕರಾವಳಿ ಯುವಕರ ಜೀವನಾಡಿಯಾಗಿ ಯುವ ಸಂಘಟನೆ ಕಾರ್ಯನಿರ್ವಹಿಸಲಿ. ಸಂಘಟನೆಗೆ ಬೇಕಾದ ಸಹಕಾರ ನೀಡುವುದಾಗಿ ಘೋಷಿಸಿದರು.

ಕಾಡಿಪಟ್ಣ-ನಡಿಪಟ್ಣ ವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್ ಬೀಸು ಬಲೆ ಬೀಸುವ ಮೂಲಕ ಸಂಘಟನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯುವ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿನಂತಿಸಿದರು.
ಪಡುಬಿದ್ರಿ ಬೀಡು ಅರಸರಾದ ರತ್ನಾಕರ ರಾಜ್ ಕಿನ್ಯಕ್ಕ ಬಲ್ಲಾಳರು ಮುಖ್ಯ ಅತಿಥಿಯಾಗಿ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಯುವ ಸಂಘಟನೆಗಳ ಪಾತ್ರ ಬಲು ದೊಡ್ಡದು ಎಂದರು.

ಸನ್ಮಾನ: ಇದೇ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಡುಬಿದ್ರಿಯ ಸಾಧಕರಾದ ಲಲಿತ್ ಕರ್ಕೇರ, ದಿಲೀಪ್ ಕರ್ಕೇರ ಮತ್ತು ಶರತ್‍ಕುಮಾರ್‍ರವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಪಡುಬಿದ್ರಿಯ ಬ್ರಹ್ಮಸ್ಥಾನದ ಒಂದನೇ ಪಾತ್ರಿ ನಾರಾಯಣ ರಾವ್, ಹಿರಿಯ ನಾಗರಿಕರಾದ ಲಕ್ಷ್ಮಣ ಸಾಲ್ಯಾನ್, ವಾಮನ ಕರ್ಕೇರ, ವಾಮನ ಕೋಟ್ಯಾನ್, ಗಂಗಾಧರ ಜಿ.ಕರ್ಕೇರ, ಸದಾನಂದ ಕರ್ಕೇರ, ರಾಜಕೀಯ ಸಾಧಕರಾದ ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ದಮಯಂತಿ ವಿ.ಅಮೀನ್, ಸೇವಂತಿ ಸದಾಶಿವ ಮತ್ತು ಅಶೋಕ್ ಸಾಲ್ಯಾನ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಕ್ರೀಡಾ ಸಾಧಕರಾದ ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಯ ಕಬಡ್ಡಿ ತಂಡದ 12 ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪಡುಬಿದ್ರಿ ಕರಾವಳಿ ಯುವ ಸಂಘಟನೆಯ ನೂತನ ಅಧ್ಯಕ್ಷ ವಿಜೇತ್ ಸಾಲ್ಯಾನ್, ಸಾಯಿರಾಧಾ ಗ್ರೂಪ್ಸ್ ಚೇರ್‍ಮೆನ್ ಮನೋಹರ ಶೆಟ್ಟಿ, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಕಾಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಲೀಲಾಧರ ಸಾಲ್ಯಾನ್, ನಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ವಿಶ್ವನಾಥ ಕರ್ಕೇರ, ಗ್ರಾಪಂ ಸದಸ್ಯರಾದ ಸೇವಂತಿ ಸದಾಶಿವ ಮತ್ತು ಅಶೋಕ್ ಸಾಲ್ಯಾನ್, ಸಂಘಟನೆಯ ಉಪಾಧ್ಯಕ್ಷ ಕೃಷ್ಣ ಕಾಂಚನ್, ಕಾರ್ಯದರ್ಶಿ ಸಾಗರ್ ಕರ್ಕೇರ, ಕೋಶಾಧಿಕಾರಿ ವಿಜೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.