ಕಮ್ಯೂನಿಸ್ಟ್ ರಾಮಣ್ಣ ರಸ್ತೆ ಅಪಘಾತದಲ್ಲಿ ಸಾವು

ಪಡುಬಿದ್ರಿ: ಪಡುಬಿದ್ರಿ ಪರಿಸರದಲ್ಲಿ ಕಮ್ಯೂನಿಸ್ಟ್ ರಾಮಣ್ಣ ಎಂದೇ ಪ್ರಸಿದ್ಧರಾದ ರಾಮ ಕುಂದರ್(86) ರಸ್ತೆ ಅಪಘಾತವೊಂದರಲ್ಲಿ ನಿಧನರಾದರು.
ಗುರುವಾರ ಪಡುಬಿದ್ರಿಯ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಕಾರು ಢಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ.

ಎಪ್ಪತರ ದಶಕದಲ್ಲಿ ರಾಜ್ಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ “ಉಳುವವನೇ ಹೊಲದೊಡೆಯ” ಘೋಷಣೆಯಡಿ ಭೂಸುಧಾರಣೆಗಾಗಿ ಚಳುವಳಿ ನಡೆದ ಸಂದರ್ಭ ರಾಮ ಕುಂದರ್‍ರವರು ಅವಿಭಜಿತ ದಕ ಜಿಲ್ಲೆಯಲ್ಲಿ ಎಂಎಚ್ ಕೃಷ್ಣಪ್ಪ,ವೀರಪ್ಪ ಸಾಲ್ಯಾನ್,ಚೆನ್ನಪ್ಪ ಮುಂತಾದವರ ರೈತ ಪರ ಹೋರಾಟದ ಸಂದರ್ಭ ಪಡುಬಿದ್ರಿಯಲ್ಲಿ ಕಾಳು ಮೊೈಲಿ ಸಹಿತ ಹಲವು ಮುಖಂಡರೊಂದಿಗೆ ಸೇರಿಕೊಂಡು ಪರಿಣಾಮಕಾರೀ ಹೋರಾಟ ಸಂಘಟಿಸಿದ್ದರು.

ಬಳಿಕ ದೇವರಾಜ್ ಅರಸು ಸರಕಾರ ಭೂಸುಧಾರಣೆ ಕಾಯಿದೆಯನ್ನು ಜಾರಿಗೆ ತಂದಾಗ ಗೇಣಿದಾರರು ಡಿಕ್ಲರೇಶನ್ ಕೊಡಿಸುವಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು.ಇದರಿಂದ ಪಡುಬಿದ್ರಿ,ನಂದಿಕೂರು,ಕಾಪು ಮುಂತಾದೆಡೆ ಗೇಣಿದಾರರು ಭೂಮಾಲಕರ ದಬ್ಬಾಳಿಕೆಯನ್ನು ಎದುರಿಸಿ ಭೂಮಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಮೂಲ್ಕಿ ವಲಯ ರೈತ ಸಂಘದ ಅಧ್ಯಕ್ಷರಾಗಿ, ಉಡುಪಿ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ,ಪಡುಬಿದ್ರಿ ಮಂಡಲ ಪಂಚಾಯತ್ ಸದಸ್ಯರಾಗಿ,ಮೂಲ್ಕಿ ಹಾಲುತ್ಪಾದಕರ ಸಂಘದ ಅಧ್ಯಕ್ಷರಾಗಿ ಸಿಪಿಐ(ಮಾರ್ಕಿಸ್ಟ್) ಪಕ್ಷದ ನಿಷ್ಟಾವಂತ ಸದಸ್ಯರಾಗಿ ಅವರು ದುಡಿದಿದ್ದರು.

ಪಡುಬಿದ್ರಿ ಭಾಗದ ಅತೀ ದೊಡ್ಡ ಕೃಷಿಕರಾಗಿದ್ದ ಅವರು ಸದಾ ಕ್ರಿಯಾಶೀಲರಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು.ಅವರಿಗೆ ಪತ್ನಿ,4 ಪುತ್ರ,3 ಪುತ್ರಿ ಇದ್ದಾರೆ.

ಸಿಪಿಐ(ಮಾರ್ಕಿಸ್ಟ್) ಪಕ್ಷದ ಉಡುಪಿ ಜಿಲ್ಲಾ ಸಮಿತಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.