ಅಭಿವೃದ್ಧಿ ಯೋಜನೆಗಳ ಬಗ್ಗೆ ಅನಿಶ್ಚಿತತೆ-ಶೋಭಾ ಕರಂದ್ಲಾಜೆ

ಪಡುಬಿದ್ರಿ: ಜಾಗತಿಕ ಕೊರೊನಾ ಹಾವಳಿಯಿಂದಾಗಿ ಆರ್ಥಿಕ ಹಿಂಜರಿತದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಅನಿಶ್ಚಿತತೆ ಇದೆ. ಕೊರೊನಾದಿಂದ ಹೊರಬರುವುದೇ ಕೇಂದ್ರ ಸರ್ಕಾರದ ಮೊದಲ ಗುರಿಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ಕುಟುಂಬಗಳಿಗೆ ವೈಯಿಕ್ತಿಕ ನೆಲೆಯಲ್ಲಿ ನೀಡಿದ ದಿನಬಳಕೆ ಸಾಮಾಗ್ರಿ ಕಿಟ್ ಮತ್ತು ಮಾಸ್ಕ್‍ಗಳನ್ನು ಹೆಜಮಾಡಿ ಗ್ರಾಪಂ ಆವರಣದಲ್ಲಿ ಶುಕ್ರವಾರ ವಿತರಿಸಿ ಮಾತನಾಡಿ, ಮುಂದಿನ ಎರಡು ವರ್ಷ ದೇಶ ಮತ್ತು ಪ್ರಪಂಚಕ್ಕೆ ಕಠಿಣವಾಗಿದೆ. ಕೇಂದ್ರ ಸರ್ಕಾರ ಸಂಸದರ ನಿಧಿಯನ್ನು ಕಡಿತಗೊಳಿಸಿ ಕೊರೊನಾ ಸಂಬಂಧಿ ಕೆಲಸಗಳಿಗೆ ಉಪಯೋಗಿಸಲಿದೆ. ಕೋವಿದ್‍ನಿಂದ ಹೊರಬರಲು ಆರ್ಥಿಕ ಹಾಗೂ ಸಾಮಾಜಿಕ ಉಳಿದಂತೆ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ವಿಶೇಷ ಪ್ರಯತ್ನ ಮಾಡಲಿದೆ. ಆದ್ಯತಾ ವಲಯದಲ್ಲಿ ಬರುವ ಯೋಜನೆಗಳನ್ನು ಗುರುತಿಸಿ ಕೈಗೆತ್ತಿಕೊಳ್ಳಬಹುದು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 22 ಕ್ವಿಂಟಾಲ್ ಅಕ್ಕಿ: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ತಲಾ 22 ಕ್ವಿಂಟಾಲ್ ಅಕ್ಕಿ ಮತ್ತು ಬೇಳೆಯನ್ನು ಪಡಿತರ ಚೀಟಿ ರಹಿತ ಹಾಗು ಎಪಿಎಲ್ ಕಾರ್ಡ್ ಇದ್ದೂ, ಪಡಿತರ ಕೊಂಡುಕೊಳ್ಳುವ ಸಾಮಥ್ರ್ಯವಿಲ್ಲದ ಕುಟುಂಬಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಶಿಲ್ಪಾ ಜಿ ಸುವರ್ಣ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯರಾದ ರೇಣುಕಾ ಪುತ್ರನ್ ಮತ್ತು ಕೇಶವ ಮೊಯಿಲಿ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ಶೆಟ್ಟಿ, ಪ್ರಮುಖರಾದ ಕುತ್ಯಾರು ನವೀನ ಶೆಟ್ಟಿ, ಶ್ರೀಕಾಂತ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಸಾದ್ ಶೆಟ್ಟಿ ಕುತ್ಯಾರು, ಶರಣ್ ಕುಮಾರ್ ಮಟ್ಟು, ಪಾಂಡುರಂಗ ಕರ್ಕೇರ ಮತ್ತಿತರರು ಇದ್ದರು.